ಪೆಲಾಪಿಡಾಸ್ 
ಪ್ರಾಚೀನ ತೀಬ್ಸ್‍ನ ಪ್ರಸಿದ್ಧ ಸೇನಾನಿ. ಎಪಾಮಿನಾಂಡಸಿನ ಸ್ನೇಹಿತ. ಸ್ಪಾರ್ಟದ ಅಧಿನದಲ್ಲಿದ್ದ ತೀಬ್ಸ್‍ನ್ನು ವಿಮೋಚನೆಗೊಳಿಸಲು ಕ್ರಿ.ಪೂ. 371ರಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ. ಸ್ಪಾರ್ಟದ ಪ್ರಾಬಲ್ಯವನ್ನು ಮುರಿಯಲು ತೀಬ್ಸ್ ನಡೆಸಿದ ಯುದ್ಧದಲ್ಲಿ ಎಪಾಮಿನಾಂಡಸನಿಗೆ ನೆರವು ನೀಡಿದ. (ಕ್ರಿ.ಪೂ. 371). ತೀಬ್ಸಿನ ನೈಋತ್ಯಕ್ಕೆ 16 ಕಿ.ಮೀ. ದೂರದಲ್ಲಿದ್ದ ಲೂಕಟ್ರ ಎಂಬಲ್ಲಿ ನಡೆದ ಕದನದಲ್ಲಿ ಸ್ಪಾರ್ಟನರು ಸೋತರು. ಎಪಾಮಿನಾಂಡಸನೊಂದಿಗೆ ಇವನು ಪೆಲಪನೀಸಸಿನ ಮೇಲೆ ದಂಡಯಾತ್ರೆ ಮಾಡಿದ (ಕ್ರಿ..ಪೂ. 370-369). ಕ್ರಿ.ಪೂ. 368ರಲ್ಲಿ ಮ್ಯಾಸಿಡೋನಿಯದ ಮೇಲೆ ನಡೆಸಿದ ಆಕ್ರಮಣದಲ್ಲಿ ಇವನು ಕೈಸೆರೆಯಾದ. ಎಪಾಮಿನಾಂಡಸ್ ಇವನನ್ನು ಬಿಡಿಸಿದ. ಕ್ರಿ. ಪೂ. 364ರಲ್ಲಿ ತೀಬನರು ಪೆಲಾಪಿಡಾಸನ ನಾಯಕತ್ವದಲ್ಲಿ ಫೆರೀಯ ನಿರಂಕುಶ ಪ್ರಭುವಿನ ಮೇಲೆ ಸಿನಸೆಫಿಲೀಯಲ್ಲಿ ಯುದ್ಧ ಮಾಡಿ ಅವನನ್ನು ಸೋಲಿಸಿದರು. ಆದರೆ, ಕದನದಲ್ಲಿ ಪೆಲಾಪಿಡಾಸ್ ಸಾವನ್ನಪ್ಪಿದ. ಇವನ ಸಾವು ತೀಬ್ಸಿಗೆ ಭಾರೀ ಪೆಟ್ಟಾಯಿತು. 	 			 (ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ